ಮಹ್ಮೂದ್ ಗಾವಾನ್
1411-81. ಬಹಮನೀ ರಾಜ್ಯದ ಪ್ರಖ್ಯಾತ ಪ್ರಧಾನ ಮಂತ್ರಿ (1453-81).

ಪರ್ಷಿಯದ ಹಾವಾನ್ (ಗೀಲಾನ್) ಎಂಬ ಊರಿನಲ್ಲಿ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ. ಇಮದುದ್ದೀನ್ ಮಹ್ಮೂದ್ ಇವನ ಜನ್ಮನಾಮ. ಹುಟ್ಟೂರಿನ ಹೆಸರಿನ ಮೇಲೆ ಮುಂದೆ ಗಾವಾನ್ ಎಂದು ಪ್ರಸಿದ್ಧನಾದನು. ಬಾಲ್ಯದಲ್ಲಿ ಒಳ್ಳೆಯ ಶಿಕ್ಷಣ ಪಡೆದು ಊರು ಬಿಟ್ಟು ಬೇರೆ ಬೇರೆ ದೇಶಗಳನ್ನು ಸಂದರ್ಶಿಸಿದ.; ಕೈರೋ ನಗರದಲ್ಲಿ ಹಗಿಜ್-ಇಬ್ನ-ಹಜ್ಮೆಲ್-ಅಸ್ಖಲಾನಿ ಎಂಬವನ ಶಿಷ್ಯನಾಗಿದ್ದು ವಿದ್ವಾಂಸನೆಂದು ಪ್ರಸಿದ್ಧನಾದ.

ಆ ಕಾಲದಲ್ಲಿ ದಖನ್ ಇಸ್ಲಾಮೀ ಸಂತರ ನೆಲವೀಡು ಎಂದು ಹೆಸರಾಗಿತ್ತು. ಇದನ್ನರಿತ ಗಾವಾನ್ ಇಲ್ಲಿಗೆ ಪ್ರಯಾಣ ಬೆಳೆಸಿದ. 1447ರಲ್ಲಿ ಬಿದರೆಗೆ ಬಂದು ತಲುಪಿದ. ಆಗಿನ ದೊರೆ ಎರಡನೆಯ ಅಲ್ಲಾಉದ್ದೀನ್ ಅಹ್ಮದನ ಅಳಿಯ ಷಾ ಮುಹೀಬುಲ್ಲಾನ ಆಶ್ರಯ ದೊರೆತು ಕ್ರಮೇಣ ಅಲ್ಲಾಉದ್ದೀನನ ಆಸ್ಥಾನದಲ್ಲಿ ನೌಕರಿಗೆ ಸೇರಿದ. 1454-55ರಲ್ಲಿ ಸುಲ್ತಾನನ ಮೈದುನ ಜಲಾಲ್‍ಖಾನ್ ತೆಲಂಗಾಣದಲ್ಲಿ ದಂಗೆಯೆದ್ದಿದ್ದಾಗ, ಗಾವಾನದ ದಕ್ಷತೆಯನ್ನು ಗಮನಿಸಿದ್ದ ಸುಲ್ತಾನ ಈತನನ್ನು ಸಾವಿರ ಸೈನಿಕರ ದಳವೊಂದಕ್ಕೆ ಮನಸಬ್ದಾರನನ್ನಾಗಿ ಮಾಡಿ ಜಲಾಲ್ ಖಾನನ ವಿರುದ್ಧ ಕಳುಹಿಸಿದ. ಈ ಕಾರ್ಯಾಚರಣೆಯಲ್ಲಿ ಈತ ಯಶಸ್ವಿಯಾದ. ಮುಂದಿನ ದೊರೆ ಹುಮಾಯೂನ್ ಪಟ್ಟಕ್ಕೆ ಬರುತ್ತಿದ್ದಂತೆಯೇ (1458) ಈತ ಪ್ರಧಾನಮಂತ್ರಿಯಾಗಿ ನೇಮಿತನಾದ. ಸುಲ್ತಾನನ ದಾಯಾದಿ ಸಿಕಂದರ್ ದಂಗೆಯೆದ್ದಾಗ ಅವನ ದಂಗೆ ಅಡಗಿಸುವಲ್ಲೂ ಈತ ಪ್ರಮುಖ ಪಾತ್ರ ವಹಿಸಿದ್ದ. ಈತನ ಪ್ರತಿಷ್ಠೆ ದಿನೇ ದಿನೇ ವರ್ಧಿಸಿತ್ತು. ಹುಮಾಯೂನನ ತರುವಾಯ ಅವನ ಮಗ ಎಂಟು ವರ್ಷದ ಬಾಲಕ ನಿಜಾಮುದ್ದೀನ್ ಅಹ್ಮದ್ ಸಿಂಹಾಸನವೇರಿದಾಗ ಅಡಳಿತ ನಿರ್ವಹಿಸಲು ನರ್ಗೀ ಸ ಬೇಗಮ್‍ಳ ಅಧ್ಯಕ್ಷತೆಯಲ್ಲಿ ರಚಿಸಿದ್ದ ಮೂರು ಸದಸ್ಯರ ಮಂಡಳಿಯಲ್ಲಿ ಈತನೂ ಇದ್ದ (1462). ಮಾಳವ ಮತ್ತು ಖಾನ್ ದೇಶದ ಸುಲ್ತಾನರು ಹಾಗೂ ಒರಿಸ್ಸಾದ ರಾಜ ಕಪಿಲೇಶ್ವರ ಇವರು ಬಹಮನೀ ರಾಜ್ಯದ ಮೇಲೆ ಸಂಯುಕ್ತ ದಾಳಿ ನಡೆಸಿದ ಸಂದರ್ಭದಲ್ಲಿ ಈತ ದಕ್ಷತೆಯಿಂದ ಕಾರ್ಯನಿರ್ವಹಿಸಿ, ಶತ್ರುಗಳನ್ನು ಹಿಮ್ಮೆಟ್ಟಿಸಿ, ಬಹಮನೀ ರಾಜ್ಯದ ಪತನ ನಿವಾರಿಸಿದ.

ಅಹ್ಮದ್ ಮರಣ ಹೊಂದಿ ಶಮ್‍ಸುದ್ದೀನ್ ಸಿಂಹಾಸನವೇರಿದಾಗ ಆ ಮಧ್ಯೆ ಸ್ವಲ್ಪಕಾಲ ಖ್ವಾಜಾ-ಎ-ಜಹಾನ್ (ಪ್ರಧಾನಮಂತ್ರಿ) ಆಗಿ ನೇಮಿತನಾಗಿದ್ದಾತ. ರಾಜಮಾತೆಯ ತಂತ್ರದಿಂದ ಅಧಿಕಾರಚ್ಯುತನಾಗಿ ಮೃತನಾದ. ಸ್ವಲ್ಪಕಾಲದಲ್ಲೇ ರಾಜಮಾತೆಯೂ ಸಕ್ರಿಯ ರಾಜಕೀಯದಿಂದ ದೂರ ಸರಿದಳು. ಆಗ ಬಹಮನೀ ರಾಜ್ಯದ ಅನೇಕ ಕಂಟಕಗಳನ್ನು ನಿವಾರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಮಹ್ಮೂದ್ ಗಾವಾನನನ್ನು ಮತ್ತೆ ಪ್ರಧಾನಮಂತ್ರಿಯಾಗಿ ನೇಮಿಸಲಾಯಿತು. (1463). ಈತ ಪ್ರಧಾನಿಯಾದ ಮೇಲೆ ಆ ರಾಜ್ಯದ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ಆಂತರಿಕ ಭದ್ರತೆಯನ್ನು ಯಶಸ್ವಿಯಾಗಿ ಸಾಧಿಸಿದ್ದಲ್ಲದೆ ನೆರೆಯ ರಾಜ್ಯದ ಶತ್ರುಗಳನ್ನು ಎದುರಿಸುವಲ್ಲೂ ಹೊಸ ನೀತಿ ಅನುಸರಿಸಿದ.

ಈತನ ಆಡಳಿತ ಸುಧಾರಣೆಗಳು ರಾಜ್ಯದ ದೃಢತೆಗೆ ಕಾರಣವಾಗಿದ್ದುವು. ಪ್ರಾಂತ್ಯಾಧಿಕಾರಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ರಾಜ್ಯದಲ್ಲಿದ್ದ ನಾಲ್ಕು ಪ್ರಾಂತ್ಯಗಳನ್ನು ಎಂಟು ಪ್ರಾಂತ್ಯಗಳನ್ನಾಗಿ ವಿಂಗಡಿಸಿದ. ಕೆಲವು ಪ್ರದೇಶಗಳು ನೇರವಾಗಿ ಸುಲ್ತಾನನ ಅಧೀನದಲ್ಲಿರುವಂತೆ ಮಾಡಿದ. ಒಂದು ಪ್ರಾಂತ್ಯವನ್ನು ಬಿಟ್ಟು ಉಳಿದೆಲ್ಲ ಪ್ರಾಂತ್ಯಗಳ ಖಿಲ್ಲೇದಾರರು ನೇರವಾಗಿ ಸುಲ್ತಾನನಿಗೆ ಹೊಣೆಯಾಗಿರಬೇಕಾಯಿತು. ಜಹಗೀರುದಾರರು ಹಾಕುತ್ತಿದ್ದ ಸ್ಥಳೀಯ ತೆರಿಗೆಗಳ ಸಂಬಂಧದಲ್ಲಿಯೂ ಸುಲ್ತಾನನ ಹತೋಟಿ ಇರುವಂತೆ ಮಾಡಿದ. ರಾಜ್ಯದ ಇಡೀ ಜಮೀನನ್ನು ಅಳತೆ ಮಾಡಿಸಿ ಹಕ್ಕುಪತ್ರಗಳ ದಾಖಲೆಗಳನ್ನು ಸಿದ್ಧಗೊಳಿಸಲು ವ್ಯವಸ್ಥೆ ಮಾಡಿದ. ನ್ಯಾಯಾಂಗ, ಸೈನ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲೂ ಈತ ಅನೇಕ ಸುಧಾರಣೆಗಳನ್ನು ತಂದ. ಗಾವಾನನ ಈ ಕ್ರಮಗಳಿಂದ ರಾಜ್ಯದ ಆಡಳಿತದಲ್ಲಿ ಬಿಗಿ ಹೆಚ್ಚಿ ಆರ್ಥಿಕ ಸ್ಥಿತಿ ಸುಧಾರಿಸಿತು. ಬಹಮನೀರಾಜ್ಯದ ವಿಸ್ತಾರವಾಗಿ ಅದು ಹಿಂದೆಂದೂ ಕಂಡರಿಯದಷ್ಟು ವೈಭವಯುತವಾಯಿತು.

ಆದರೆ ಬಹಮನೀ ಆಸ್ಥಾನದಲ್ಲಿ ಪ್ರಾರಂಭದಿಂದಲೂ ಇದ್ದ ದಖನೀ ಮತ್ತು ಪರದೇಶೀ ಗುಂಪುಗಳಲ್ಲಿದ್ದ ದ್ವೇಷ ಹೊಗೆಯಾಡುತ್ತಲೇ ಇತ್ತು. ಮಹ್ಮೂದ್ ಗಾವಾನ್ ವಿದೇಶದಿಂದ ಬಂದವನಾದ್ದರಿಂದ ಅವನನ್ನು ದಖನಿಗಳು ಪರದೇಶಿಗಳ ಮುಖಂಡನೆಂದೇ ಬಗೆದಿದ್ದರು. ಸುಲ್ತಾನ ದಕ್ಷಿಣದ ಕಡೆ ದಂಡಯಾತ್ರೆ ಕೈಗೊಂಡಿದ್ದಾಗ ಅಸ್ಥಾನದಲ್ಲಿ ಗಾವಾನನ ವಿರುದ್ಧ ಪಿತೂರಿ ನಡೆಯಿತು. ವಿರೋಧಿಗಳು ಗಾವಾನನ ಕಾರ್ಯದರ್ಶಿಯನ್ನು ಶಾಮೀಲು ಮಾಡಿಕೊಂಡು ಅವನಿಂದ ಪ್ರಧಾನಮಂತ್ರಿಯ ಮುದ್ರೆ ಪಡೆದು ಖಾಲಿ ಕಾಗದದ ಮೇಲೆ ಒತ್ತಿ ಆ ಕಾಗದದಲ್ಲಿ ಗಾವಾನ್ ಒರಿಸ್ಸದ ರಾಜನಿಗೆ ಬಹಮನೀ ರಾಜ್ಯದ ಮೇಲೆ ದಂಡೆತ್ತಿಬರುವಂತೆ ಆಹ್ವಾನಿಸಿರುವ ಒಕ್ಕಣೆ ಇರುವಂತೆ ಬರೆದು, ಸುಲ್ತಾನ ಕೊಂಡಪಲ್ಲಿಗೆ ಬಂದಾಗ ಅವನ ಮುಂದೆ ನಕಲಿ ಪತ್ರ ಇಟ್ಟರು. ಆಗ ಸುಲ್ತಾನ ಗಾವಾನನನ್ನು ಕರೆಸಿ, ರಾಜದ್ರೋಹಕ್ಕೆ ಯಾವ ಶಿಕ್ಷೆ ವಿಧಿಸಬೇಕೆಂದು ಕೇಳಿದ. ಅದಕ್ಕೆ ಹಿನ್ನೆಲೆ ಅರಿಯದಿದ್ದ ಗಾವಾನ ತಟ್ಟನೆ ಮರಣದಂಡನೆಯೇ ಶಿಕ್ಷೆ ಎಂದು ಹೇಳಿದ. ಆಗ ಗಾವಾನನಿಗೆ ಅವನದೆಂದು ಹೇಳಲಾದ ರಾಜದ್ರೋಹದ ಪತ್ರವನ್ನು ತೋರಿಸಲಾಯಿತು. ಆ ಪತ್ರದಲ್ಲಿರುವ ಮುದ್ರೆ ತನ್ನದೆಂದು ಗಾವಾನ್ ಒಪ್ಪಿಕೊಂಡರೂ ಪತ್ರದಲ್ಲಿರುವ ಬರೆಹದ ಬಗ್ಗೆ ತನಗೇನೂ ತಿಳಿಯದೆಂದು ಹೇಳಿದ. ಅದರೆ ಸುಲ್ತಾನ ಕೋಪದಿಂದ ಪ್ರಧಾನಿಯ ತಲೆ ಹೊಡೆಯುವಂತೆ ಆಜ್ಞೆ ಮಾಡಿ ನಿರ್ಗಮಿಸಿದ. 1481 ಏಪ್ರಿಲ್ 15ರಂದು ಮಹ್ಮೂದ ಗಾವಾನನನ್ನು ಮರಣದಂಡನೆಗೆ ಗುರಿಪಡಿಸಲಾಯಿತು.

ಮಹ್ಮೂದ್ ಗಾವಾನ್ ಮಧ್ಯಯುಗ ಇತಿಹಾಸದ ಗಮನಾರ್ಹ ವ್ಯಕ್ತಿ. ಈತ ರಾಜ್ಯದ ಉನ್ನತ ಅಧಿಕಾರ ಸ್ಥಾನದಲ್ಲಿದ್ದರೂ ಸರಳಜೀವಿಯಾಗಿದ್ದ. ತನ್ನ ಜೀವನ ನಿರ್ವಹಣೆಗೆ ವ್ಯಾಪಾರದಿಂದ ಬಂದ ಲಾಭವನ್ನು ಮಾತ್ರ ಬಳಸುತ್ತಿದ್ದ. ಜ್ಞಾನಾಕಾಂಕ್ಷಿಯೂ ವಿದ್ಯೆಯ ಪೋಷಕನೂ ಆಗಿದ್ದ. ಈತ ಬಿದರೆಯಲ್ಲಿ 1472ರಲ್ಲಿ ವಿದ್ಯಾಪೀಠವೊಂದನ್ನು (ಮದರಸಾ) ಸ್ಥಾಪಿಸಿದ್ದ. ಅಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿಗಳ ವ್ಯವಸ್ಥೆ ಮಾಡಿಸಿದ್ದ. ಈತನ ಖಾಸಗಿ ಗ್ರಂಥಾಲಯದಲ್ಲಿ 1,000 ಹಸ್ತ ಪ್ರತಿಗಳಿದ್ದುವು. ಈತ ಸ್ಥಾಪಿಸಿದ ಮದರಸಾದ ಗ್ರಂಥಾಲಯದಲ್ಲಿ 3000 ಹಸ್ತ ಪ್ರತಿಗಳಿದ್ದುವು. ತಾಜರ್-ಉಲ್ ಇನ್ಸಾ ಮತ್ತು ದಿವಾನ್-ಇ-ಅಶ್ರ್ ಎಂಬ ಎರಡು ಗ್ರಂಥಗಳನ್ನು ಈತ ರಚಿಸಿದನೆಂದು ಚರಿತ್ರಕಾರ ಫೆರಿಸ್ತ ತಿಳಿಸುತ್ತಾನೆ. ಈತ ಪಾರಸೀ ಭಾಷೆಯಲ್ಲಿ ಬರೆದ ಎರಡು ದೀರ್ಘ ಪದ್ಯಗಳು ಇಂದಿಗೂ ಉಳಿದು ಬಂದಿದ್ದು, ಸರಳ ಸೌಂದರ್ಯಕ್ಕೆ ಪ್ರಸಿದ್ಧವಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ